ನಳಿನಿ ಜಯವಂತ್	
1926-ಹಿಂದಿ ಚಲನಚಿತ್ರ ನಟಿ. ಪ್ರಸಿದ್ಧ ನಟಿ ಶೋಭನಾ ಸಮರ್ಥಳ ಸೋದರ ಸಂಬಂಧಿ. ಶಾಲೆಯಲ್ಲಿರುವಾಗಲೇ ನಾಟಕ ಕಲೆ ಹಾಗೂ ನೃತ್ಯದಲ್ಲಿ ಅಪಾರ ಆಸಕ್ತಿ. ಆರನೆಯ ವಯಸ್ಸಿನಲ್ಲಿಯೇ ಆಕಾಶವಾಣಿ ಮಕ್ಕಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹತ್ತನೆಯ ವಯಸ್ಸಿನಿಂದಲೇ ಶಾಲೆಯ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಇವರಿಗೆ ಹೆಸರು ತಂದಿದ್ದು ರವೀಂದ್ರನಾಥ ಠಾಕೂರರ ಶ್ರೀಮತೀಜಿ ನಾಟಕದ ನಾಯಕಿ ಪಾತ್ರ. ರಂಗಭೂಮಿಯಿಂದ ಚಲನಚಿತ್ರಕ್ಕೆ ಬಂದ ಇವರ ಮೊದಲ ಚಿತ್ರ ರಾಧಿಕಾ. ವೀರೇಂದ್ರ ದೇಸಾಯಿ ನಿರ್ದೇಶಿತವಾದ ಈ ಚಿತ್ರದಲ್ಲಿ ಪಾತ್ರವಹಿಸದಾಗ ಈ ಬಾಲ ಪ್ರತಿಭೆಗೆ ಹದಿಮೂರರ ಎಳೆಹರೆಯ. ಇವರನ್ನು ನಾಯಕಿಯನ್ನಾಗಿಸಿಕೊಂಡ ಮೆಹಬೂಬರ 'ಸಿಸ್ಟರ್, ವೀರೂ ದೇಸಾಯಿಯರ `ನಿರ್ದೋಷ್ ಚಿತ್ರಗಳು ತೆರೆಕಂಡವು. ಆರ್. ಎಸ್. ಚೌಧರಿಯವರ `ಆಂಖ್ ಮಿಚೋಲಿಯಲ್ಲಿ, 'ಅದಬ್ ಅರ್ಜ್‍ನಲ್ಲಿ ಒಳ್ಳೆಯ ಅಭಿನಯ ನೀಡಿದರು. ಇವರ ಲಾವಣ್ಯ ಹಾಗೂ ಉಲ್ಲಸಿತ ಯೌವನ, ಮುಗ್ಧಭಾವಗಳಿಂದಾಗಿ ಈ ಚಿತ್ರಗಳು ಬೇಗ ಜನಪ್ರಿಯವಾಗಿ ಯಶಸ್ಸು ಪಡೆದವು. 1943ರಲ್ಲಿ ನಿರ್ದೇಶಕ ವೀರೇಂದ್ರ ದೇಸಾಯಿಯನ್ನು ಮದುವೆಯಾದರು. ಈ ವಿವಾಹ ಹಾಗೂ ಹಲವು ವರ್ಷಗಳ ಅನಂತರ ನಡೆದ ವಿಚ್ಛೇದನ ಎರಡೂ ಕೋಲಾಹಲವನ್ನುಂಟುಮಾಡಿದವು. ಈ ಹಗರಣಗಳಿಂದ ಚಿತ್ರಗಳ ಯಶಸ್ಸಿಗೆ ಧಕ್ಕೆಯಾದೀತೆಂದು ಹಲವಾರು ನಿರ್ಮಾಪಕರು ಇವರನ್ನು ಕೈಬಿಟ್ಟರು. 1944ರಿಂದ 1947ರವರೆಗೆ ಈಕೆಗೆ ಚಿತ್ರನಿರ್ಮಾಪಕರಿಂದ ಯಾವ ಆಹ್ವಾನವೂ ಬರಲಿಲ್ಲ. ಆಮೇಲೆ ವಾರಸ್‍ದಾರ್ ಎಂಬ ಗುಜರಾತಿ ಚಿತ್ರದಲ್ಲಿ ಅಭಿನಯಿಸಿದರು. ಮಹಾರಾಷ್ಟ್ರದವರಾದ ಇವರ ಗುಜರಾತಿ ಮಾತುಗಾರಿಕೆ ಪ್ರಶಂಸೆಗೆ ಪಾತ್ರವಾಯಿತು. ಧರ್ಮಸೇಯವರ `ಆನೋಖ್ ಪ್ಯಾರ್ ಚಿತ್ರದ ಮೂಲಕ ಮತ್ತೆ ಇವರಿಗೆ ಹಿಂದಿ ಚಿತ್ರರಂಗಕ್ಕೆ ಪ್ರವೇಶ ದೊರಕಿತು. ಅನಂತರ ನರ್ಗೀಸ್, ದಿಲೀಪ್‍ಕುಮಾರರಂಥ ಕಲಾವಿದರೊಂದಿಗೆ ಸಮತೂಕವಾಗಿ ಅಭಿನಯಿಸಿ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಂಡರು. `ಆಂಖೇ, `ನೌಜವಾನ್ ಚಿತ್ರಗಳು ಇವರ ಅಭಿನಯ ಪ್ರತಿಭೆಯನ್ನು ಸಾಬೀತು ಮಾಡಿದವು. ಫಿಲ್ಮಿಸ್ತಾನ್ ಅವರ `ಸಮಾಧಿಯ ಮೂಲಕ ಅಶೋಕ ಕುಮಾರ್-ನಳಿನಿ ಜಯವಂತರ ಜನಪ್ರಿಯ ತಾರಾಜೋಡಿ ಕಾಣಿಸಿಕೊಂಡಿತು. `ಸಂಗ್ರಾಮ್, `ಕಾಫಿಲಾ, `ಚಂಚಲ್, `ಶೋಲೆ, `ನೌ ಬಹಾರ್, `ಸಲೋನಿ, `ಜಲ್‍ಪರಿ', `ಮಿ. ಎಕ್ಸ್ ಮೊದಲಾದುವು ಈ ತಾರಾ ಜೋಡಿಯ ಯಶಸ್ವೀ ಚಿತ್ರಗಳು. ಎಸ್.ಕೆ. ಓಝಾರ 'ನಾಜ್ (1955) ಎಂಬುದು ಈಜಿಪ್ಟ್ ಹಾಗೂ ಲಂಡನ್‍ಗಳಲ್ಲಿ ಚಿತ್ರೀಕರಣಗೊಂಡು, ವಿದೇಶಿ ಹೊರಾಂಗಣವುಳ್ಳ ಪ್ರಥಮ ಭಾರತೀಯ ಚಿತ್ರ ಇದು. ನಾಯಕಿಗೆ ಪ್ರಾಧಾನ್ಯವಿದ್ದ ಆ ಕಾಲದಲ್ಲಿ ದೋ ರಾಹಾ, ಚಿಂಗಾರಿ, ಜಾದೂ ಮುಂತಾದ ಚಿತ್ರಗಳಲ್ಲಿ ಅಷ್ಟು ಪ್ರಸಿದ್ಧರಲ್ಲದ ನಟರೊಡನೆ ಅಭಿನಯಿಸಿ ಚಿತ್ರಗಳನ್ನು ಯಶಸ್ವಿಗೊಳಿಸಿದ ಕೀರ್ತಿ ಇವರದು. ನಂದ ಕಿಶೋರ್‍ರಂಥ ಪೌರಾಣಿಕ ಚಿತ್ರಗಳಲ್ಲಿಯೂ ದುರ್ಗೇಶನಂದಿನಿಯಂಥ ಐತಿಹಾಸಿಕ ಚಿತ್ರದಲ್ಲಿಯೂ ಈಕೆ ಅಭಿನಯಿಸಿದ್ದಾರೆ. ದೇವಾನಂದನ ಜೊತೆ ಇವರು ನಟಿಸಿದ 'ಹಿಂದೂಸ್ತಾನ್ ಹಮಾರ ಅತ್ಯಂತ ಜನಪ್ರಿಯ ಚಿತ್ರ. ಇದೇ ಜೋಡಿಯ 'ರಾಹಿ ಚಿತ್ರವನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಚಿತ್ರಿಸಲಾಯಿತು. ಫಿಲ್ಮಿಸ್ತಾನ್ ಅವರ ಮುನೀಮ್‍ಜಿ (1955) ಚಿತ್ರ ಹಾಸ್ಯ ಪಾತ್ರಗಳ ಅಭಿನಯದಲ್ಲೂ ಇವರಿಗೆ ಇರುವ ಪ್ರತಿಭೆಯನ್ನು ಪ್ರದರ್ಶಿಸಿತು. ದೇವಾನಂದರ ಸ್ವಂತ ಚಿತ್ರ `ಕಾಲಾಪಾನಿಯಲ್ಲಿ (1958) ಅಭಿನಯಿಸಿದ ಈಕೆಗೆ ಅತ್ಯುತ್ತಮ ಪೋಷಕ ತಾರೆಗೆ ದೊರೆಯುವ ಫಿಲ್ಮ್‍ಫೇರ್ ಪ್ರಶಸ್ತಿಯೂ ಲಭಿಸಿತು.

  	ಇವರ ಸತ್ತ್ವಪೂರ್ಣ ಅಭಿನಯದ ಇತರ ಕೆಲವು ಉತ್ತಮ ಚಿತ್ರಗಳೆಂದರೆ ಶಿಕಸ್ತ (1953), ನಾಸ್ತಿಕ್ (1954) ಮುಕ್ತಿ 1961, ಸೇನಾಪರೆ 1962, ಗಲ್ರ್ಸ್ ಹಾಸ್ಟೆಲ್, ಜಿಂದಂಗಿ ಹೌರ್ ಹಮ್ 1965 ಬಾಂಬೆ ರೇನ್‍ಕೊರ್ನ್ 1983. ಮೊದಲಾದವು. ಐ.ಎಸ್.ಜೋಹರ್ ನಿರ್ದೇಶಿಸಿರುವ `ಹಮ್ ಸಬ್ ಚೋರ್ ಹೈ (1957) ಚಿತ್ರದಲ್ಲಿ ಅವಳಿಮಕ್ಕಳ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಈಕೆ ಭಾವಪೂರ್ಣ ಅಭಿವ್ಯಕ್ತಿಯ ಸ್ಮರಣೀಯ ಅಭಿನಯ ನೀಡಿದ್ದಾಳೆ. ತನ್ನ ಈಚಿನ ಚಿತ್ರಗಳಾದ ಮಾ ಕೆ ಆಂಸೂ, ಅಮರ್ ರಹೇ ಏ ಪ್ಯಾರ್ ಅಯಶಸ್ವಿಯಾದ ನಂತರ ಈಕೆ ತೆರೆಯಿಂದ ದೂರವಾದಳು.

 	ಪ್ರತಿಷ್ಠಿತ ಚಿತ್ರ ಪತ್ರಿಕೆ ಫಿಲ್ಮ್‍ಫೇರ್ ಭಾರತೀಯ ಚಿತ್ರರಂಗದ ಅತ್ಯಂತ ಸುಂದರ ಹುಡುಗಿ ಯಾರು ಎಂಬುದನ್ನು ನಿರ್ಧರಿಸಲು 1952ರಲ್ಲಿ ನಡೆಸಿದ ಒಂದು ಸ್ಪರ್ಧೆಯಲ್ಲಿ ಜಯ ಗಳಿಸಿದವರು ಬಾದಾಮಿ ಕಣ್ಣಿನ ಅಯಸ್ಕಾಂತ ನಗೆಯ ಮುಗ್ಧಮೊಗದ ನಳಿನಿ ಜಯವಂತ್. ಸ್ವಂತಿಕೆಯಿದ್ದ ಈ ಸುಂದರ ತಾರೆಯ ಕೇಶ ವಿನ್ಯಾಸವನ್ನು ಅಂದು ಅಪಾರ ಮಂದಿ ಅನುಕರಿಸಿದರು. 
                             (ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ